ದುರ್ಗಾದಾಸ್ 2 -

1900-74. ಭಾರತದ ಒಬ್ಬ ಪತ್ರಿಕೋದ್ಯಮಿ. 1900ರ ನವೆಂಬರ್ 23ರಂದು ಜನಿಸಿದರು. ಲಾಹೋರಿನ ಡಿ.ಎ.ವಿ. ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಇವರು ಭಾರತದ ಅಸೋಸಿಯೇಟೆಡ್ ಪ್ರೆಸ್ ವಾರ್ತಾ ಸಂಸ್ಥೆಯಲ್ಲಿ ಅಭ್ಯಾಸಿಯಾಗಿ ಸೇರಿ ಆ ಸಂಸ್ಥೆಯ ಸಂಸದೀಯ ವರದಿಗಾರರೂ ಸಂಪಾದಕರೂ ಆಗಿ ಕೆಲಸ ಮಾಡಿದರು (1918-37). ಇವರು ನೇರ ರಾಜಕಾರಣವನ್ನು ಪ್ರವೇಶಿಸದೆ ಪತ್ರಿಕೋದ್ಯಮ ವೃತ್ತಿಯಲ್ಲಿ ಮುಂದುವರಿದರು. ಉನ್ನತ ರಾಜಕಾರಣಿಗಳ, ಶ್ರೇಷ್ಠ ಅಧಿಕಾರಿಗಳ, ಸಾರ್ವಜನಿಕರ ನಂಬುಗೆಗೆ ಪಾತ್ರರಾಗಿ ಅವರ ಗೌರವ ಆದರಣೆಗಳನ್ನು ಗಳಿಸಿದರು.

ಸುದ್ದಿ ಸಂಗ್ರಹಿಸುವುದರಲ್ಲಿ ವಿಶಿಷ್ಟವಾದ ಕಲೆಯನ್ನು ಇವರು ಕರಗತ ಮಾಡಿಕೊಂಡಿದ್ದರು. ಇತರರಿಗಿಂತ ಮುಂಚೆಯೇ ಸುದ್ದಿಯನ್ನು ಪತ್ತೆಹಚ್ಚಿ (ಸ್ಕೂಪ್) ವರದಿ ಮಾಡುವ ಕೌಶಲ ಇವರದಾಗಿತ್ತು. 1931ರ ಮಾರ್ಚ್ ತಿಂಗಳಿನಲ್ಲಿ ಆದ ಗಾಂಧಿ - ಇರ್ವಿನ್ ಒಪ್ಪಂದ; 1929ರಲ್ಲಿ ಭಗತ್‍ಸಿಂಗ್ ಮತ್ತು ಸಂಗಡಿಗರಿಂದ ಕೇಂದ್ರ ಅಸೆಂಬ್ಲಿಗೆ ಬಾಂಬು ಎಸೆತ, ಎರಡನೆಯ ಮಹಾಯುದ್ಧದ ಕಾಲದಲ್ಲಿ ಅಮೆರಿಕದ ಅಧ್ಯಕ್ಷ ರೂಸ್‍ವೆಲ್ಟರ ಪ್ರತಿನಿಧಿಯಾಗಿದ್ದ ಲೂಯಿ ಜಾನ್ಸನರೊಡನೆ ನೆಹರೂ ನಡೆಸಿದ ಗುಪ್ತ ಭೇಟಿ - ಇವು ಇವರು ವರದಿ ಮಾಡಿದ ಮೂರು ಪ್ರಮುಖ ಸ್ಕೂಪ್ ಸುದ್ದಿಗಳು.

1938-44ರಲ್ಲಿ ಇವರು ಕಲ್ಕತ್ತ ಮತ್ತು ದೆಹಲಿ ಸ್ಟೇಟ್ಸ್‍ಮನ್ ಪತ್ರಿಕೆಗೆ ವಿಶೇಷ ಪ್ರತಿನಿಧಿಯಾಗಿದ್ದರು. ಅದಕ್ಕೆ ಅಗ್ರಲೇಖನಗಳನ್ನೂ ಬರೆಯುತ್ತಿದ್ದರು. ಅಲ್ಲದೇ ಇವರು 1939-44ರಲ್ಲಿ ಸಂಯುಕ್ತ ಪ್ರಾಂತ್ಯದ (ಸ್ಥೂಲವಾಗಿ ಈಗಿನ ಉತ್ತರ ಪ್ರದೇಶ) ಪತ್ರಿಕಾ ಸಲಹಾ ಸಮಿತಿಯ ಅಧ್ಯಕ್ಷರೂ ನವದೆಹಲಿಯ ಪತ್ರಿಕೋದ್ಯಮಿಗಳ ಸಂಘದ ಕಾರ್ಯದಶಿಯೂ ಆಗಿದ್ದರು. 1945ರಲ್ಲಿ ಇವರು ಯುದ್ಧ ಬಾತ್ಮೀದಾರರಾಗಿ ಕೆಲಸ ಮಾಡಿದರು. ಅದೇ ವರ್ಷ ಇವರಿಗೆ ಸಂಯುಕ್ತ ಪ್ರಾಂತ್ಯದ ಪತ್ರಿಕೋದ್ಯಮ ಸಮ್ಮೇಳನದ ಅಧ್ಯಕ್ಷತೆಯ ಗೌರವ ಪ್ರಾಪ್ತವಾಯಿತು. ಇವರು 1944ರಲ್ಲಿ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯ ಸಂಯುಕ್ತ ಸಂಪಾದಕ ಹಾಗೂ ರಾಜಕೀಯ ಅಂಕಣ ಲೇಖಕರಾದರು. ಇವರು ಆ ಪತ್ರಿಕೆಯ ಪ್ರಧಾನ ಸಂಪಾದಕರಾಗಿದ್ದುದು 1957 - 60ರಲ್ಲಿ. 1960 ರಲ್ಲಿ ಇಂಡಿಯ ನ್ಯೂಸ್ ಅಂಡ್ ಫೀಚರ್ಸ್ ಅಲೈಯನ್ಸ್ (ಇನ್‍ಫಾ) ಪ್ರಧಾನ ಸಂಪಾದಕರಾಗಿದ್ದರು. ಭಾರತ ಪಾಕಿಸ್ತಾನ ಪತ್ರಿಕಾ ಸಲಹಾ ಸಮಿತಿಯ ಸದಸ್ಯರೂ (1949-62) ಭಾರತ ಸಂಸತ್ತಿನ ಪತ್ರಿಕಾ ಗ್ಯಾಲರಿ ಸಮಿತಿಯ ಅಧ್ಯಕ್ಷರೂ (1951-60 ಮತ್ತು 1962-63) ಆಟ್ಟವದಲ್ಲಿ 1950 ರಲ್ಲಿ ನಡೆದ ಕಾಮನ್‍ವೆಲ್ತ್ ಪತ್ರಿಕಾ ಸಮ್ಮೇಳನಕ್ಕೆ ಭಾರತ ನಿಯೋಗದ ಸದಸ್ಯರೂ ಭಾರತದ ಪ್ರೆಸ್ ಕ್ಲಬ್ಬಿನ ಅಧ್ಯಕ್ಷರೂ (1959-62) ಆಗಿದ್ದ ದುರ್ಗಾದಾಸರಿಗೆ (1959-61ರಲ್ಲಿ) ಅಖಿಲ ಭಾರತ ಪತ್ರಿಕಾ ಸಂಪಾದಕರ ಸಮ್ಮೇಳನದ ಅಧ್ಯಕ್ಷತೆ ಪ್ರಾಪ್ತವಾಗಿತ್ತು. ಸಣ್ಣ ವೃತ್ತ ಪತ್ರಿಕೆಗಳ ವಿಚಾರಣಾ ಸಮಿತಿಯ ಸದಸ್ಯರಾಗಿ ಇವರು ಅವುಗಳ ಸ್ಥಿತಿಗತಿಗಳನ್ನು ಉತ್ತಮಪಡಿಸುವುದಕ್ಕೆ ನೀಡಿದ ಸಲಹೆ ಅಮೂಲ್ಯವಾದುದು. ಇವರು ಎರಡು ಸಾರಿ ವಿಶ್ವಪರ್ಯಟನ ಮಾಡಿದರು. 

ಪ್ರಸಿದ್ಧ ರಾಜಕೀಯ ಅಂಕಣ ಬರಹಗಾರರಾಗಿದ್ದ ದುರ್ಗಾದಾಸ್ ಅವರು ಹಿಂದೂಸ್ತಾನ್ ಟೈಮ್ಸ್‍ನಲ್ಲಿ ಬರೆಯುತ್ತಿದ್ದ ಎಡಿಟರ್ಸ್ ನೋಟ್ ಬುಕ್, ಇನ್‍ಸಾಫನಲ್ಲಿ ಬರೆಯುತ್ತಿದ್ದ ಪೊಲಿಟಿಕಲ್ ಡೈರಿ, ಇನ್‍ಫಾದ ಪೊಲಿಟಿಕಲ್ ಡೈರಿ ಎಂಬ ಅಂಕಣ ಬರಹಗಳು ಜನಪ್ರಿಯವಾಗಿದ್ದುವು. ದುರ್ಗಾದಾಸರ ಲೇಖನಗಳು ಖಚಿತವೂ ಆಕರ್ಷಕವೂ ವಿಶ್ಲೇಷಣಾತ್ಮಕವೂ ಆಗಿದ್ದು, ಇವರ ಅನುಭವ, ಆಳವಾದ ಅಭ್ಯಾಸ, ದೀರ್ಘ ಪರಿಶ್ರಮಗಳ ದ್ಯೋತಕಗಳಾಗಿದ್ದುವು. ಇವರು ಕೆಲವು ಗ್ರಂಥಗಳನ್ನೂ ಬರೆದಿದ್ದಾರೆ. ಇಂಡಿಯ ಅಂಡ್ ದಿ ವಲ್ರ್ಡ್ (1958). ರಾಮರಾಜ್ಯ ಇನ್ ಆಕ್ಷನ್, ಇಂಡಿಯಾ ಫ್ರಮ್ ಕಜರ್ûನ್ ಟು ನೆಹರು ಅಂಡ್ ಆಫ್ಟರ್ (1969) - ಇವು ಇವರ ಕೃತಿಗಳು. ಗಾಂಧೀ ಇನ್ ಕಾರ್ಟೂನ್ಸ್ ಮತ್ತು ಸುಮಾರು 6,000 ಪುಟಗಳಲ್ಲಿ ಹತ್ತು ಸಂಪುಟಗಳ ಸರದಾರ್ ಪಟೇಲ್ಸ್ ಕರೆಸ್ಪಾಂಡೆನ್ಸ್ ಎಂಬ ಗ್ರಂಥಗಳನ್ನು ಇವರು ಸಂಪಾದಿಸಿದ್ದಾರೆ. 1974ರ ಮೇ 17ರಂದು ಇವರು ದೆಹಲಿಯಲ್ಲಿ ನಿಧನರಾದರು. 
										(ಪಿ.ಎನ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ